ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸನಿವಾಸ ಪದವಿಪೂರ್ವ ಕಾಲೇಜು (SDM Residential PU College, Ujire) ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಕಾಲೇಜಿನಲ್ಲಿ ಇಂದು (ಎ. 17) ನಡೆಯಿತು.
ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಸೋನಿಯಾ ಯಶೋವರ್ಮ ಅವರು, ಏಕಾಗ್ರತೆಯಿಂದ ಕೂಡಿದ ಕಲಿಕೆ ಸಾಧನೆಗೆ ದಾರಿ ಮಾಡಿಕೊಡುವುದು. ಅದಕ್ಕೆ ವಿದ್ಯಾರ್ಥಿಗಳು ಪಡೆದ ಅಂಕಗಳೇ ಸಾಕ್ಷಿ. ಕಾಲೇಜಿನಲ್ಲಿ ನಿರಂತರವಾಗಿ ಸಿಕ್ಕಿರುವ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಇನ್ನಷ್ಟು ಸಾಧನೆ ಹೊರಹೊಮ್ಮುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಮಾತನಾಡಿ, “ಅತ್ಯುತ್ತಮ ಅಂಕಗಳ ಸಾಧನೆಗೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟಿದ್ದಾರೆ. ಉಪನ್ಯಾಸಕ ವೃಂದವೂ ಶ್ರಮಿಸಿದೆ. ಎಲ್ಲರ ನಿಷ್ಠೆಗೆ ಭಗವಂತನ ಆಶೀರ್ವಾದವೂ ದೊರೆತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಉತ್ತಮಿಕೆ ಕಾಯ್ದುಕೊಳ್ಳುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿ” ಎಂದರು.
ಉಪ ಪ್ರಾಂಶುಪಾಲ ಮನೀಷ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣಿತಶಾಸ್ತ್ರ ಉಪನ್ಯಾಸಕ ಕೃಷ್ಣಪ್ರಸಾದ್ ಸಾಧಕ ವಿದ್ಯಾರ್ಥಿಗಳ ಮಾಹಿತಿ ವಾಚಿಸಿದರು. ಸಂಸ್ಕೃತ ಉಪನ್ಯಾಸಕ ಮಹೇಶ್ ಎಸ್. ಎಸ್. ವಂದಿಸಿ, ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳು (ವಿಜ್ಞಾನ ವಿಭಾಗ) ಶೇ. 100 ಫಲಿತಾಂಶ ದಾಖಲಿಸಿದ್ದು, ಧೀಮಂತ್ ಹೆಬ್ಬಾರ್ ರಾಜ್ಯಕ್ಕೆ 7ನೇ ಸ್ಥಾನ ಪಡೆದುಕೊಂಡಿರುತ್ತಾರೆ. ಪರೀಕ್ಷೆ ಎದುರಿಸಿದ 152 ವಿದ್ಯಾರ್ಥಿಗಳಲ್ಲಿ 109 ಉನ್ನತ ದರ್ಜೆ ಹಾಗೂ 43 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

