ಸ್ವಚ್ಛತೆ ಆರೋಗ್ಯಕ್ಕೆ ಮೂಲ, ಕಾಲೇಜು ವಾತಾವರಣವೂ ಕಲಿಕೆಗೆ ಪೂರಕವಾಗಿರಬೇಕಾದರೆ ಶುದ್ಧವಾದ ಪರಿಸರ ಸೃಷ್ಟಿಯಾಗಬೇಕು. ಈ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಸ್ವಚ್ಛತಾ ಸಿಬ್ಬಂದಿಗಳ ಪಾತ್ರ ಬಹಳ ಮುಖ್ಯ ಅವರ ಸೇವೆಯನ್ನು ಗುರುತಿಸುವ ಇಂತಹ ಕಾರ್ಯಗಳು ಶ್ಲಾಘನೀಯಯೆಂದರು. ಕಾಲೇಜಿನಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸ್ವಚ್ಛತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ್ದ ಶ್ರೀಯುತ ಅಮ್ಮು ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಶ್ರೀಯುತ ಹರೀಶ್ ಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಮ್ಮುರವರನ್ನು ಉಡುಗೊರೆಯೊಂದಿಗೆ ಸನ್ಮಾನಿಸಲಾಯಿತು.ಅವರ ಆಸೆಯಂತೆ ಇನ್ನೂ ಒಂದು ವರ್ಷಗಳ ಕಾಲ ಸೇವಾವಧಿ ವಿಸ್ತರಿಸಿದ ಕುರಿತಾಗಿರುವ ಪತ್ರ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಅವರು ಅಮ್ಮು ಅವರ ಮುಂದಿನ ಜೀವನ ಸುಖಕರವಾಗಿರಲಿಯೆಂದು ಹಾರೈಸಿದರು. ಕಾಲೇಜಿನ ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಜಿ. ಡಿ. ಯವರು ಅಮ್ಮು ಅವರ ಕುರಿತಾಗಿ ಅನುಭವದ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್ ಕಾಲೇಜಿನ ಉಪನ್ಯಾಸಕ ವೃಂದ, ಸ್ವಚ್ಛತಾ ಸಿಬ್ಬಂದಿಗಳು ಹಾಜರಿದ್ದರು. ಕನ್ನಡ ಉಪನ್ಯಾಸಕಿ ಕವಿತಾ ಉಮೇಶ್ ವಂದಿಸಿ ನಿರೂಪಿಸಿದರು.

