ಪುಸ್ತಕಗಳು ಜ್ಞಾನದ ಕೈದೀವಿಗೆ. ದೃಶ್ಯ ಶ್ರವ್ಯ ಮಾಧ್ಯಮಗಳಿಗೆಲ್ಲಾ ಪ್ರೇರಕ ಶಕ್ತಿ ಪುಸ್ತಕ. ಓದುವ, ಬರೆಯುವ ಹವ್ಯಾಸಗಳು ಅರೋಗ್ಯಯುತ ಬದುಕಿನ ಸೂತ್ರಗಳೂ ಹೌದು. ವೀರೇಂದ್ರ ಹೆಗ್ಗಡೆಯವರ ಬದುಕು – ಬರಹಗಳೆಲ್ಲವೂ ಪಾರದರ್ಶಕ. ಉನ್ನತ ವಿಚಾರಗಳು,ಆಕಾಂಕ್ಷೆಗಳು ಬದುಕನ್ನು ಉನ್ನತೀಕರಿಸಬಲ್ಲದು. ಪೂಜ್ಯರು ತಮ್ಮ ಬದುಕಿನ ಮೂಲಕ ಸಾಧನೆ, ಆದರ್ಶ,ಹೃದಯವಂತಿಕೆ, ಬರಹಗಳ ಮೂಲಕ ಜ್ಞಾನ ವಿಚಾರಗಳ, ಮಾಹಿತಿಗಳ ಸಾಗರವನ್ನೇ ಉಣಬಡಿಸಿದ್ದಾರೆ ಅಂತಹ ಸುಮಾರು 44 ಪುಸ್ತಕಗಳು ನಿಮ್ಮ ಮುಂದಿದೆ ಓದಿ ತಿಳಿದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವೀರೇಂದ್ರ ಹೆಗ್ಗಡೆ ವಿರಚಿತ ಸುಮಾರು 44 ‘ಪುಸ್ತಕಗಳ ಪ್ರದರ್ಶನ’ವನ್ನು ಉದ್ಘಾಟಿಸಿದ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿಯಾಗಿರುವ ಶ್ರೀಯುತ ಸೋಮಶೇಖರ ಶೆಟ್ಟಿಯವರು ಮಾತನಾಡಿದರು. ವಿದ್ಯಾರ್ಥಿದೆಸೆಯಲ್ಲಿ ಓದುಗಾರಿಕೆಗೆ ಹೆಚ್ಚಿನ ಒತ್ತು ನೀಡಿ. ಸಾಹಿತ್ಯದ ಕೃಷಿಗೆ ಖಾವಂದರು ಪ್ರಾರಂಭದಿಂದಲೂ ಉತ್ತೇಜನ ನೀಡುತ್ತಾ ಬಂದಿದ್ದಾರೆ.ಅವರ ಸಾಧನೆಗಳು ಇಂದು ಮಾತಾಗಿದ್ದು ಮನ್ನಣೆ ಪಡೆದಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಕಾಲೇಜಿನ ಬಿತ್ತಿಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ವೇದಿಕೆಯಲ್ಲಿ ರತ್ನಮಾನಸದ ನಿಲಯ ಪಾಲಕರಾದ ಶ್ರೀಯುತ ಯತೀಶ್ ಹಾಗೂ ಕಾಲೇಜಿನ ಗ್ರಂಥಪಾಲಕರಾದ ಗಿರಿಧರ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸರಾದ ಮಹೇಶ್ ಎಸ್.ಎಸ್ ನಿರೂಪಿಸಿ ವಂದಿಸಿದರು.

