Skip to content Skip to footer

ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ವಾಲಿಬಾಲ್ ಕ್ರೀಡಾಕೂಟ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ ಉಜಿರೆ ಇಲ್ಲಿ ನಡೆಯಿತು. ಕ್ರೀಡಾಕೂಟಗಳು ಸ್ಪರ್ಧಾತ್ಮಕ ಮನೋಭಾವ, ಸಾಮಾಜಿಕವಾಗಿ ಬೆಳೆಯುವ ಬೆರೆಯುವ ಗುಣವನ್ನು ವೃದ್ಧಿಸುವುದರೊಂದಿಗೆ, ವಿದ್ಯಾರ್ಥಿಗಳು ಎಳವೆಯಲ್ಲಿ ಸ್ವಸ್ಥ – ಸದೃಢವಾಗಿ ಬೆಳೆಯುವಲ್ಲಿ ಸಹಕಾರಿಯಾಗಿದೆ. ಕ್ರೀಡೆಗಳು ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ಬದುಕನ್ನು ಕಟ್ಟಿಕೊಡುವುದು . ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡು ಸರ್ವಾಂಗೀಣ ಸದೃಢ ,ಸ್ವಸ್ತ ಸಮಾಜದ ನಿರ್ಮಾಣಕ್ಕೆ ನಾವು ಬದ್ಧರಾಗಬೇಕು ಎಂದು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಬೆಳ್ತಂಗಡಿಯ ಪೊಲೀಸ್ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ಆಗಿರುವ ಶ್ರೀಯುತ ನಾಗೇಶ್ ಕದ್ರಿ ಅವರು ಮಾತನಾಡಿದರು. ಕಲಿಕೆಯೊಂದಿಗೆ ಕ್ರೀಡೆ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮನ್ನ ಗುರುತಿಸುವಂತೆ ಮಾಡುವುದು . ಏಕಾಗ್ರತೆ ದೈಹಿಕ ,ಮಾನಸಿಕ ಸದೃಢತೆಗೆ ಆಟೋಟಗಳು ಸಹಕಾರಿ.ಎಲ್ಲಾ ಶಿಕ್ಷಣ ಸಂಸ್ಥೆಗಳು ಕ್ರೀಡೆಗಳಿಗೆ ಮಹತ್ವವನ್ನು ನೀಡಬೇಕು . ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅನಾರೋಗ್ಯ ಪರಿಸ್ಥಿತಿಗಳನ್ನ ಎದುರಿಸಲು ಹಾಗೂ ಸ್ವಸ್ಥ ಸದೃಢ ಸಮಾಜದ ನಿರ್ಮಾಣಕ್ಕೆ ಕ್ರೀಡೆಗಳು ಉತ್ತಮ ಮಾರ್ಗೋಪಾಯವಾಗಿದೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್. ಡಿ .ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿರುವ ಶ್ರೀಯುತ ಸತೀಶ್ಚಂದ್ರ ಎಸ್ ಇವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಡಿ. ಎಮ್ ವಸತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತ್ ಮಾತನಾಡಿ ಭಾಗವಹಿಸುವಿಕೆ ಬಹಳ ಮುಖ್ಯ, ಬಹುಮಾನವಲ್ಲ ,ಸ್ಪರ್ಧಾತ್ಮಕ ಮನೋಭಾವದೊಂದಿಗೆ ಈ ಕ್ರೀಡೆಯನ್ನು ಯಶಸ್ವಿಗೊಳಿಸಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಶುಭಾಶಯ ಕೋರಿದರು.
ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ 16 ತಂಡ ಹಾಗೂ ವಿದ್ಯಾರ್ಥಿನಿಯರ 7 ಒಟ್ಟು 23 ತಂಡಗಳು ಭಾಗವಹಿಸಿದ್ದವು.

ವಿದ್ಯಾರ್ಥಿಗಳ ತಂಡದಲ್ಲಿ ಎಸ್‌.ಡಿ.ಎಂ ಪದವಿ ಪೂರ್ವ ಕಾಲೇಜು ಉಜಿರೆ ತಂಡ ಪ್ರಥಮ ಹಾಗೂ ವಾಣಿ ಪದವಿ ಪೂರ್ವ ಕಾಲೇಜು ರನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿತು.
ವಿದ್ಯಾರ್ಥಿನಿಯರ ತಂಡದಲ್ಲಿ ಮುಂಡಾಜೆ ಪದವಿ ಪೂರ್ವ ಕಾಲೇಜಿನ ತಂಡ ಪ್ರಥಮ ಎಸ್‌.ಡಿ.ಎಂ ಪದವಿ ಪೂರ್ವ ಕಾಲೇಜು ಉಜಿರೆ ತಂಡ ರನ್ನರ್ ಸ್ಥಾನವನ್ನು ಪಡೆದುಕೊಂಡಿತು.
ಸಂಪೂರ್ಣ ಜವಾಬ್ದಾರಿಯನ್ನು ಎಸ್ .ಡಿ .ಎಂ ವಸತಿ ಪದವಿ ಪೂರ್ವ ಕಾಲೇಜು ವಹಿಸಿಕೊಂಡು ಸಮರ್ಥವಾಗಿ ನಿರ್ವಹಿಸಿತು. ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್, ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿಯಾಗಿ ಸೋಮಶೇಖರ್ ಶೆಟ್ಟಿ , ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಜಿ.ಡಿ ಅವರು ಹಾಗೂ ಸಂಸ್ಥೆಯ ಇತರೆ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು. ಭೌತಶಾಸ್ತ್ರದ ಉಪನ್ಯಾಸಕರಾದ ವಿಕ್ರಂ, ಗಣಿತಶಾಸ್ತ್ರ ಉಪನ್ಯಾಸಕರಾದ ಪ್ರಿಯ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.